ಬಾಷ್ಪೀಭವನ -
ದ್ರವಸ್ಥಿತಿಯಲ್ಲಿರುವ ಒಂದು ಪದಾರ್ಥ ಆವಿರೂಪಕ್ಕೆ ಪರಿವರ್ತನೆಗೊಳ್ಳುವ ಪ್ರಕ್ರಿಯೆ (ಇವ್ಯಾಪೊರೇಶನ್).  ಸಂಘನಿತ ಸ್ಥಿತಿಯಲ್ಲಿ (ಕಂಡೆನ್ಸ್ಡ್ ಸ್ಟೇಟ್) ವಸ್ತುಗಳ ಅಣುಗಳು ಪ್ರಬಲಾಕರ್ಷಣ ಬಲಗಳಿಂದ ಬಂಧಿತವಾಗಿರುತ್ತವೆ.  ಈ ಬಲಗಳನ್ನು ಅವೆಲ್ಲ ಅಣುಗಳ ಮೇಲೆ ವರ್ತಿಸುತ್ತಿರುವ ಸಮಾನ ಮತ್ತು ವಿರುದ್ಧ ದಿಕ್ಕಿನ ಪರಾಕರ್ಷಣ ಬಲಗಳು ಸಮತೋಲದಲ್ಲಿಟ್ಟಿರುತ್ತವೆ.  ದ್ರವದ ಪ್ರತಿಯೊಂದು ಅಣುವಿಗೂ ಆಕರ್ಷಣೆಯ ವಿಭವ ಶಕ್ತಿಯನ್ನು (ಪೊಟೆನ್ಶಿಯಲ್ ಎನರ್ಜಿ) ಮೀರಿ ಜಿಗಿಯಲು ಒಲವು.  ಅಣುಗಳ ಚಲನಶಕ್ತಿಯೇ ಇದರ ಕಾರಣ.  ಈ ಚಲನಶಕ್ತಿ-ವಿಮೋಚನೆಯ ಒಲವು-ವಸ್ತುವಿನ ಉಷ್ಣತೆಯನ್ನು ಅವಲಂಬಿಸಿದೆ.  ಉಷ್ಣತೆಯ ಒಂದೊಂದು ಮಟ್ಟದಲ್ಲಿಯೂ, ಆವೃತ ಆಕರ್ಷಣ ಬಲಗಳನ್ನು ಮೀರಿ, ದ್ರವದ ಮೇಲ್ಮೈ ಮೂಲಕ, ವಿಮೋಚನೆ ಪಡೆಯುವಷ್ಟು ಚಲನಶಕ್ತಿಯುತವಾಗಿರುತ್ತದೆ.  ಅಣುಗಳ ಈ ವಿಮೋಚನೆಯೇ ಬಾಷ್ಟೀಭವನ. 

ಪ್ರತಿಯೊಂದು ದ್ರವ ವಸ್ತುವೂ ಒಂದು ನಿರ್ದಿಷ್ಟ ಉಷ್ಣತೆಯಲ್ಲಿ (ಕುದಿಬಿಂದು) ಕುದಿಯುತ್ತದೆ.  ದ್ರವದ ಮೇಲಿರುವ ಒತ್ತಡವನ್ನು ಇದು ಅವಲಂಭಿಸಿದೆ.  ಒತ್ತಡ ಹೆಚ್ಚಿದರೆ ಕುದಿಬಿಂದು ಹೆಚ್ಚುತ್ತದೆ.  ಕಮ್ಮಿಯಾದರೆ ಕಡಿಮೆ ಆಗುತ್ತದೆ.  ವಸ್ತು ದ್ರವರೂಪದಲ್ಲಿರುವಾಗ ಅದರ ಅಣುಗಳು ಚಲಿಸುತ್ತಿರುತ್ತವೆ.  ಆದರೆ ಅಣು ಅಣುಗಳ ನಡುವೆ ಇರುವ ಬಂಧನ ಶಕ್ತಿಯಿಂದಾಗಿ ಇವು ಒಂದರೊಡನೊಂದು ಹೊಂದಿಕೊಂಡಿರುತ್ತವೆ.  ಯಾವುದೇ ರೂಪದಲ್ಲಿ ಶಕ್ತಿಯನ್ನು ಇವುಗಳಿಗೆ ಒದಗಿಸದೆ ಇವುಗಳ ಚಲನೆಯನ್ನು ಹೆಚ್ಚಿಸಬಹುದು.  ದ್ರವ ವಸ್ತುವನ್ನು ಕಾಸುವುದರ ಮೂಲಕ ಅಣುಗಳಿಗೆ ಅಧಿಕ ಶಕ್ತಿಯನ್ನು ಉಷ್ಣ ರೂಪದಲ್ಲಿ ಒದಗಿಸಬಹುದು.  ಆಗ ಅಣುಗಳು ಹೆಚ್ಚು ವೇಗವಾಗಿ ಚಲಿಸಲಾರಂಭಿಸುತ್ತವೆ.  ಹೀಗೆ ಹೆಚ್ಚು ಹೆಚ್ಚು ಕಾಸಿದಂತೆಲ್ಲ ಅಣುಗಳ ಚಲನೆ ಹೆಚ್ಚು ಹೆಚ್ಚು ಆಗುತ್ತ ಹೋಗುತ್ತದೆ.  ಈ ಹೆಚ್ಚಿನ ಚಲನೆ ಅಣು ಅಣುಗಳ ನಡುವಿನ ಬಂಧನ ಶಕ್ತಿಯನ್ನು ಮೀರಿದಾಗ ಅಣುಗಳು ದ್ರವದ ಮೇಲ್ಮೈಯಿಂದ ಹೊರ ಜಿಗಿಯಲು ಪ್ರಾರಂಭಿಸುತ್ತವೆ.  ಹೆಚ್ಚು ಉಷ್ಣವನ್ನು ಒದಗಿಸಿದಂತೆಲ್ಲ ಹೆಚ್ಚು ಅಣುಗಳು ದ್ರವದ ಮೇಲ್ಮೈಯನ್ನು ಜಿಗಿದೋಡಲು ಅವಕಾಶವಾಗುತ್ತದೆ.  ದ್ರವ ಕುದಿಬಿಂದುವನ್ನು ತಲಪಿದಾಗ ಅದರ ಮೇಲ್ಮೈಯನ್ನು ಬಿಟ್ಟು ಹೋಗುವ ಅಣುಗಳ ವಾಯುಭಾರ ದ್ರವದ ಮೇಲಿರುವ ಒತ್ತಡಕ್ಕೆ ಸರಿಯಾಗುತ್ತದೆ.  ದ್ರವದ ಮೇಲ್ಮೈಯಿಂದ  ಹೀಗೆ ಹೊರಗೆ ಬಂದ ಅಣುಗಳನ್ನು ಬೇರೆಡೆಗೆ ಸಾಗಿಸಿ ಸಾಂದ್ರೀಕರಿಸಿ ಮತ್ತೆ ದ್ರವ ವಸ್ತುವನ್ನು ಸಂಗ್ರಹಿಸಬಹುದು.  ಬೇಕಿಲ್ಲದಿದ್ದರೆ ಹೊರಗೆ ಬಂದ ಅಣುಗಳನ್ನು ವಾಯುಮಂಡಲಕ್ಕೆ ಬಿಟ್ಟರೂ ಬಿಡಬಹುದು.

	ಮೇಲಿನ ವಿವರದಿಂದ ಈ ಮುಂದಿನ ಎರಡು ಅಂಶಗಳನ್ನು ಗಮನಿಸಬಹುದು.  1. ದ್ರವದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದಾಗ, ಅದರ ಕುದಿಬಿಂದು ಕಡಿಮೆ ಆಗುತ್ತದೆ.  2. ದ್ರವದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿ ಉಷ್ಣತೆಯಲ್ಲಿ ಕೂಡ ಆ ದ್ರವವನ್ನು ಬಾಷ್ಪೀಭವಿಸುವಂತೆ ಮಾಡಬಹುದು.  ಈ ವಿಧಾನಕ್ಕೆ ನಿರ್ವಾತ ಬಾಷ್ಪೀಭವನ ಎಂದು ಹೆಸರು.  

	ಸಕ್ಕರೆಯನ್ನು ಸ್ಫಟಿಕೀಕರಿಸಲು ಕಾರ್ಖಾನೆಗಳಲ್ಲಿ ನಿರ್ವಾತ ಬಾಷ್ಪೀಭವನ ವಿಧಾನವನ್ನು ಅನುಸರಿಸುತ್ತಾರೆ.  ನೀರನ್ನು ಕಾಸಿದಾಗ ನೀರು ಹಬೆಯಾಗಿ ಮೇಲ್ಮೈಯಿಂದ ಹೊರಗೆ ಹೋಗುವುದನ್ನು ನೋಡಬಹುದು.  ಬಿಸಿಲಿನಿಂದ ಕಾದ ನೀರು ಸಮುದ್ರ, ಹೊಳೆ, ತೊರೆ, ಕೆರೆ ಕುಂಟೆಗಳಿಂದ ಹಬೆಯಾಗಿ ಮೇಲೆ ಹೋಗಿ ಸಾಂದ್ರೀಕರಿಸಿದಾಗ ಬೀಳುವ ನೀರೇ ಮಳೆ.  ನೀರನ್ನು ಕಾಸಿ ಬಂದ ಹಬೆ (ಉಗಿ) ಉಪಯೋಗಿಸಿ ಉಗಿಬಂಡಿಯನ್ನು ನಡೆಸುವುದಾಗಿದೆ.  ಸಮುದ್ರದ ನೀರನ್ನು ತೊಟ್ಟಿಗಳಲ್ಲಿಟ್ಟು ನೀರಿನ ಅಂಶವನ್ನು ಬಾಷ್ಪೀಭವನದಿಂದ ಹೊರತೆಗೆದ ತರುವಾಯು ಉಳಿವುದೇ ಅಡುಗೆ ಉಪ್ಪು.          										(ಕೆ.ಎಸ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ